ಗೋಡೆ ಮೇಲೆ ಬಸ್ಸು, ರೈಲು... ಮಕ್ಕಳನ್ನು ಸೆಳೆಯುತ್ತಿದೆ ಈ ಸರ್ಕಾರಿ ಶಾಲೆ
ಈಗಾಗಲೇ ರೈಲು ಮಾದರಿಯ ರೂಪದಲ್ಲಿ ಶಾಲೆಯ ಗೋಡೆಗಳ ಮೇಲೆ ಟ್ರೈನ್ ಚಿತ್ರವನ್ನು ಬಿಡಿಸಿದ್ದನ್ನು ಕಂಡಿದ್ದೇವೆ. ಅದರ ಸಾಲಿಗೆ ಈಗ ಇದೇ ಮೊಟ್ಟ ಮೊದಲ ಬಾರಿಗೆ ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದ್ದು, ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.
ಈಗೀನ ಕಾಲದಲ್ಲಿಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ನಮ್ಮ ನಡುವೆ ಹಲವು ಸರ್ಕಾರಿ ಶಾಲೆಗಳು ಗಮನಾರ್ಹ ಸಾಧನೆ ಮಾಡಿವೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಅರಿವು ಮೂಡಿಸುತ್ತಿವೆ. ಈ ನಿಟ್ಟಿನಲ್ಲಿ ಪುಣೆದಹಳ್ಳಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಎಸ್ಡಿಎಂಸಿ ಶ್ರಮದ ಫಲವಾಗಿ ಶಾಲೆಯು ಹೊಸ ರೀತಿಯಲ್ಲಿ ಸಿಂಗರಿಸಿಕೊಂಡು ಜನ ಮನ ಸೆಳೆಯುತ್ತದೆ.
ಶಾಲೆಯ ಕಟ್ಟಡದ ಒಂದು ಬದಿಗೆ ರೈಲಿನ ಚಿತ್ರವನ್ನು, ಮತ್ತೊಂದು ಬದಿಗೆ ಕೆಎಸ್ಆರ್ಟಿಸಿ ಬಸ್ನ ಚಿತ್ರ ಬರೆಯಲಾಗಿದೆ. ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ತಾವೇ ಹಣ ಹೊಂದಿಸಿ ಶಾಲೆಗೆ ಹೊಸ ಕಳೆ ತಂದಿದ್ದಾರೆ. ಶಾಲೆಯು ಶಿಕಾರಿಪುರ -ಶಿರಾಳಕೊಪ್ಪ ಹೆದ್ದಾರಿಯಲ್ಲಿ ಸಿಗುವ ಪುಣೆದಹಳ್ಳಿಯಲ್ಲಿದೆ. ಈ ಮಾರ್ಗದಲ್ಲಿ ಸಾಗುವರು ಇತ್ತ ಕಣ್ಣು ಹಾಯಿಸಿದರೆ ಕೆಎಸ್ಆರ್ಟಿಸಿ ಬಸ್ ಏಕೆ ನಿಂತಿದೆ, ಹಳ್ಳಿ ಇಲ್ಲದಿದ್ದರೂ ರೈಲು ಬಂದಿದ್ದು ಹೇಗೆ ಎಂದು ಯೋಚಿಸುವಂತೆ ಮಾಡುತ್ತಿದೆ.
ರೈಲಿನ ಚಿತ್ರವನ್ನು ಸುಮಾರು 100 ಅಡಿಗೂ ಹೆಚ್ಚು ಉದ್ದ ಬಿಡಿಸಿದ್ದು, ಶಾಲೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸರ್ಕಾರಿ ಶಾಲೆ ಹೊಸ ರೂಪವನ್ನು ಪಡೆದುಕೊಂಡಿರುವುದು ಉತ್ತಮ ಬೆಳವಣಿಗೆ. ಕರ್ನಾಟಕ ರಾಜ್ಯದಲ್ಲಿ ರೈಲು ಮಾದರಿಯ ಚಿತ್ರಗಳನ್ನು ಗೋಡೆ ಮೇಲೆ ಹೊಂದಿದ ಎರಡನೇ ಶಾಲೆ ಎಂಬ ಹೆಗ್ಗಳಿಕೆಗೂ ಈ ಶಾಲೆ ಪಾತ್ರವಾಗಿದೆ.
ಒಳ್ಳೆಯ ಶಿಕ್ಷಣ ನೀಡಲು ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಶಿಕ್ಷಣ ಇಲಾಖೆ ನೀಡುತ್ತದೆ. ಹಾಗಾಗಿ ಇಂತಹ ಬೆಳವಣಿಗೆಯಿಂದ ಶಾಲೆಗೆ ಒಂದು ಉತ್ತಮ ಹೆಸರು ಬರುತ್ತಿದೆ. ಇಂತಹ ಕೆಲಸಗಳಿಗೆ ನಮ್ಮಇಲಾಖೆ ಎಂದಿಗೂ ಪ್ರೋತ್ಸಾಹ ನೀಡುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಿದ್ಧಪ್ಪ ತಿಳಿಸಿದರು.
ಹಾರೋಪುರ ಶಾಲೆಯಲ್ಲಿ ಇದೇ ರೀತಿಯಲ್ಲಿ ರೈಲಿನ ಚಿತ್ರ ಇರುವುದನ್ನ ಸಾಮಾಜಿಕ ಜಾಲತಾಣದಲ್ಲಿ ನೋಡಿ ಪ್ರೇರಣೆಯಿಂದ ಈ ರೀತಿಯಲ್ಲಿ ರೈಲು ಮತ್ತು ಬಸ್ಸಿನ ಚಿತ್ರವನ್ನ ಗೋಡೆಯ ಮೇಲೆ ಬಿಡಿಸಿದ್ದು, ಇದರಿಂದ ಶಾಲೆಯಲ್ಲಿ ಮಕ್ಕಳ ಹಾಜರಾತಿಯು ಹೆಚ್ಚಿದೆ. ಕೆಎಸ್ಆರ್ಟಿಸಿ ಬಸ್ನ ಚಿತ್ರ ಹೊಂದಿರುವ ಶಾಲೆ ಇದೆ ಮೊದಲು ಎನ್ನುವುದಕ್ಕೆ ಸಂತಸ ಆಗುತ್ತದೆ. ಒಟ್ಟು ಐವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಈ ಶಾಲೆಯನ್ನ ಉನ್ನತಿಕರಿಸಲಾಗಿದೆ ಎಂದು ಶಾಲಾ ಮುಖ್ಯಶಿಕ್ಷಕ ಮಂಜಪ್ಪ ತಿಳಿಸಿದರು.