ನಗರದಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಿಎಸ್ಡಿಎ ಮೂಲಕ ದೇಶದ ಎಲ್ಲ ಜಿಲ್ಲೆಗಳಲ್ಲಿನ ಉದ್ಯೋಗಿ ಹಾಗೂ ನಿರುದ್ಯೋಗಿಗಳ ಮಾಹಿತಿ, ಅವರ ಶಿಕ್ಷಣ ಮತ್ತು ಅವರ ಕೌಶಲ್ಯತೆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತದೆ. ಜತೆಗೆ ಆಯಾ ಜಿಲ್ಲೆಯಲ್ಲಿರುವ ಐಟಿಐ ಸೇರಿದಂತೆ ಎಲ್ಲ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ಇದರಡಿ ಸೇರಿಸಿ ಜಿಲ್ಲಾಧಿಕಾರಿಯನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂಬಂಧ ಈಗಾಗಲೇ ಎಲ್ಲ ರಾಜ್ಯಗಳಿಗೂ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಕುಂಭಕರ್ಣ ನಿದ್ದೆಯಲ್ಲಿರುವ ರಾಜ್ಯ ಸರ್ಕಾರ ಒಂದೂವರೆ ತಿಂಗಳು ಕಳೆದರು ಈವರೆಗೂ ಜಿಲ್ಲಾಧಿಕಾರಿಗೆ ಮಾಹಿತಿ ಕಳುಹಿಸಿಲ್ಲ. ಇಂತಹ ಸರ್ಕಾರ ಇನ್ನು ಹೆಚ್ಚು ದಿನ ಇರುವುದಿಲ್ಲ. ಆದಷ್ಟು ಬೇಗ ಯೋಜನೆ ಪ್ರಾರಂಭವಾಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಮೇಳಕ್ಕೆ ಹರಿದು ಬಂದ ಉದ್ಯೋಗಾಕಾಂಕ್ಷಿಗಳು:
ಉದ್ಯೋಗ ಮೇಳದ ಮೊದಲ ದಿನ ಆಕಾಂಕ್ಷಿಗಳ ದಂಡೇ ಹರಿದುಬಂದಿದೆ. ಸುಮಾರು 2 ಸಾವಿರಕ್ಕು ಹೆಚ್ಚು ಜನರು ಜಿಲ್ಲೆ ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ಕೌಶಲ್ಯ ತರಬೇತಿ ಹಾಗೂ ಸಂದರ್ಶನ ಕುರಿತು ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲಾಯಿತು. ಬಳಿಕ ಸಂದರ್ಶನದಲ್ಲಿ ಆಯ್ಕೆಯಾದ ಕೆಲವರಿಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪ್ರವೇಶ ಪತ್ರ ವಿತರಿಸಿದರು.
ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ ಜಾರಿಯಲ್ಲಿ ರಾಜಕೀಯವಿಲ್ಲ:
ಇನ್ನು ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ ಪ್ರಾರಂಭದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣೆ ಬಂದಾಗ ಕೆಲವರು ಪ್ರತಿಭಟನೆಗೆ ಕುಳಿತುಕೊಳ್ಳುತ್ತಾರೆ. ಆದರೆ ಕೇಂದ್ರ ಸರ್ಕಾರ ಯೋಜನೆಗೆ 980 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಯಾವ ರಾಜಕೀಯ ಇಲ್ಲ. ಮಾಜಿ ಪ್ರಧಾನಿ ದಿ. ವಾಜಪೇಯಿ ಅಡಿಗಲ್ಲು ಹಾಕಿದ ಯೋಜನೆ ಆರಂಭವಾಗಲಿದೆ. ಆದರೆ ಸುಪ್ರೀಂಕೋರ್ಟ್ ಇದಕ್ಕೆ ತಡೆ ನೀಡಿದ್ದು, ಅದು ತೆರವುಗೊಂಡ ಬಳಿಕ ಯೋಜನೆ ಪ್ರಾರಂಭಿಸಲಾಗುವುದು ಎಂದರು.