ಶಿರಸಿಯಲ್ಲಿ ಮಂಗಗಳ ಸಾವು... ಜನರಲ್ಲಿ ಹೆಚ್ಚಿದ ಆತಂಕ
ಸಂಗ್ರಹ ಚಿತ್ರ
ಸಿದ್ದಾಪುರ ತಾಲೂಕಿನ ಬಾಳಗೋಡು ಎನ್ನುವ ಗ್ರಾಮದ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಕಳೆದ ಒಂದು ವಾರದ ಹಿಂದೆ ಒಂದು ಮಂಗವೊಂದು ಮೃತಪಟ್ಟಿತ್ತು. ಇದಾದ ಕೆಲ ದಿನದಲ್ಲಿಯೇ ಮೂರ್ನಾಲ್ಕು ಮಂಗಗಳು ಮೃತಪಟ್ಟಿವೆ. ಈ ಗ್ರಾಮದಲ್ಲಿ ಸುಮಾರು 30ಕ್ಕೂ ಅಧಿಕ ಮನೆಗಳಿದ್ದು, 100ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಈಗಾಗಲೇ ತಾಲೂಕಿನ ಪಕ್ಕದ ತಾಲೂಕಿನಲ್ಲಿಯೇ ಮಂಗನ ಕಾಯಿಲೆ ಕಾಣಿಸಿಕೊಂಡು ಹಲವರು ಮೃತಪಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಮಂಗ ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೇ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ಅರಣ್ಯಕ್ಕೆ ಹೋಗುವ ಮುನ್ನ ಎಚ್ಚರಿಕೆ ವಹಿಸಿ ಎನ್ನುವ ಸಂದೇಶವನ್ನ ನೀಡಿದ್ದಾರೆ. ಈವರೆಗೂ ಗ್ರಾಮದ ಜನರಿಗೆ ಮುಂಜಾಗೃತ ಕ್ರಮವಾಗಿ ಯಾವುದೇ ಔಷಧ ನೀಡಿಲ್ಲ. ಸಿದ್ದಾಪುರ ತಾಲೂಕು ಆಸ್ಪತ್ರೆಗೆ ಹೋಗಿ ಕೇಳಿದರೆ ತಮ್ಮಲ್ಲಿ ಔಷದಿ ಇಲ್ಲ ಎನ್ನುತ್ತಿದ್ದಾರಂತೆ.
ಇನ್ನು ಮೃತಪಟ್ಟ ಮಂಗವನ್ನ ಗ್ರಾಮದ ಮನೆಯಲ್ಲಿ ಸಾಕಿದ ನಾಯಿಗಳು ತಿಂದಿರುವುದರಿಂದ ನಾಯಿಗಳನ್ನ ಸಹ ಮನೆಯ ಬಳಿ ಬರದಂತೆ ಗ್ರಾಮಸ್ಥರು ಗ್ರಾಮದ ಹೊರಗಡೆ ಇರುವ ಪ್ರದೇಶದಲ್ಲಿ ಕಟ್ಟಿ ಹಾಕಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಬಳಿ ಕೇಳಿದ್ರೆ ಒಂದು ಮಂಗ ಮೃತಪಟ್ಟಿರುವುದು ತಮ್ಮ ಗಮನಕ್ಕೆ ಬಂದಿದೆ. ಪಶು ವೈದ್ಯರ ಸಹಾಯದಿಂದ ಅವುಗಳ ಅಂಗಾಗವನ್ನ ಪರೀಕ್ಷೆ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ವರದಿ ಬಂದ ನಂತರ ಯಾವ ಕಾರಣಕ್ಕೆ ಮೃತಪಟ್ಟಿದೆ ಎನ್ನುವುದು ತಿಳಿಯುತ್ತದೆ. ಸದ್ಯ ಗ್ರಾಮಸ್ಥರಿಗೆ ಅರಣ್ಯ ಹೋಗುವಾಗ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಔಷಧಿಗಳನ್ನ ಸಹ ನೀಡಲಿದ್ದಾರೆ ಎಂದರು.
ಸದ್ಯ ಬಾಳಗೋಡಿನ ಸುತ್ತಮುತ್ತಲ ಜನ ಸರಣಿ ಮಂಗಗಳ ಸಾವಿಂದ ಕಂಗೆಟ್ಟಿದ್ದು, ಊರಿನ ಹಸುಗಳು , ಸಾಕು ನಾಯಿಗಳನ್ನು ಕಟ್ಟಿ ಕಾಡಿಗೆ ಹೋಗದಂತೆ ಎಚ್ಚರಿಕೆ ವಹಿಸಿದ್ದಾರೆ. ಸತ್ತ ಮಂಗಗಳ ವರದಿ ಬರುವವರೆಗೂ ಇಲಾಖೆ ಕಾದು ನೋಡುತ್ತಿದ್ದು, ಸಾವು ಸಂಭವಿಸುವುದರೊಳಗಾಗಿ ಈ ಭಾಗದಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಬೇಕಿದೆ.