ಸುಕ್ರಿ ಬೊಮ್ಮ ಗೌಡರನ್ನು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಮಾರಂಭ ನಡೆವ ರಾಕ್ ಗಾರ್ಡನ್ ತನಕ ಮೆರವಣಿಗೆಯಲ್ಲಿ ಕರೆತರಬೇಕೆಂದು ಯೋಜಿಸಲಾಗಿತ್ತು. ಆದರೆ ಶಾಸಕರು ಬರುವುದು ತಡವಾದ ಕಾರಣ ರಾಕ್ ಗಾರ್ಡನ್ ಪ್ರವೇಶ ದ್ವಾರದಲ್ಲಿ ಕಲಾವಿದೆ ಸುಕ್ರಿ ಬೊಮ್ಮ ಗೌಡ ಹಾಗೂ ಸಿದ್ದಾಪುರದಿಂದ ಬಂದಿದ್ದ ಡೊಳ್ಳು ಬಾರಿಸುವ ಮಹಿಳಾ ಕಲಾವಿದರು ಕಾದು ಕುಳಿತರು. ಅಲ್ಲದೇ ಮಹಿಳಾ ಇಲಾಖೆಯ ಸಿಬ್ಬಂದಿ, ಸಮಾರಂಭಕ್ಕೆ ಬಂದಿದ್ದ ಎರಡು ನೂರು ಜನ ಮಹಿಳೆಯರು ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಸಹ ಜನಪ್ರತಿನಿಧಿಯ ಬರುವಿಕೆಗೆ ಕಾದರು.
ಅಧಿಕಾರಿಗಳು ಶಾಸಕರನ್ನು ದೂರವಾಣಿ ಮೂಲಕ ಸತತವಾಗಿ ಸಂಪರ್ಕಿಸುತ್ತಲೇ ಇದ್ದರು. ಆ ಕಡೆಯಿಂದ ಶಾಸಕರು ಇನ್ನೇನು ಹತ್ತೆ ನಿಮಿಷದಲ್ಲಿ ಬರುತ್ತಾರೆ ಎಂಬ ಮಾಹಿತಿ ಬಂತೆಂದು ಅಧಿಕಾರಿಗಳು ಕಲಾವಿದರಿಗೆ, ಮಾಧ್ಯಮಗಳಿಗೆ ಮಾಹಿತಿ ರವಾನಿಸುತ್ತಲೇ ಇದ್ದರು. ಇದು ಸತತ 5 ಗಂಟೆ ತನಕ ನಡೆಯಿತು. ಮಾಧ್ಯಮದವರು ಯಾರು ಸುಳ್ಳು ಹೇಳುತ್ತಿದ್ದಾರೆಂದು ಪರೀಕ್ಷಿಸಿಯೂ ಆಯಿತು. ಹೀಗಾಗಿ ಸಮಾರಂಭದಿಂದ ಹೊರ ನಡೆಯಲು ಅಣಿಯಾಗುವ ಸುಳಿವು ಸಿಗುತ್ತಿದ್ದಂತೆ ಅಧಿಕಾರಿಗಳು ಸಮಾರಂಭ ಆರಂಭಕ್ಕೆ ಸಜ್ಜಾದರು.
ಶಾಸಕರು ಯಾವುದೇ ಸಮಸ್ಯೆ ಬಗೆಹರಿಸುತ್ತಿದ್ದಾರಂತೆ. ಅವರು ಸಮಾರಂಭ ಮುಂದುವರಿಸಲು ಹೇಳಿದ್ದಾರೆಂಬ ಮಾಹಿತಿ ಬಂತು ಎಂದ ಅಧಿಕಾರಿಗಳು ಕಲಾವಿದೆ ಸುಕ್ರಜ್ಜಿಯನ್ನು ತಾವೇ ಮೆರವಣಿಗೆಯಲ್ಲಿ 300 ಮೀಟರ್ ನಡೆಸಿದರು. ಸಮಾರಂಭ ಆರಂಭವಾಯಿತು. ಅಷ್ಟರಲ್ಲಿ ವಿದ್ಯುತ್ ಕೈ ಕೊಟ್ಟಿತು.
ಒಟ್ಟಿನಲ್ಲಿ ಮಹಿಳಾ ದಿನಾಚರಣೆ ಹಲವು ಗೊಂದಲ ಮತ್ತು ಅಸಮರ್ಪಕ ವ್ಯವಸ್ಥೆಗೆ ಕಾರಣವಾಯಿತು. ಇನ್ನು ಕಾರ್ಯಕ್ರಮದಲ್ಲಿ ಸುಕ್ರಜ್ಜಿ ಘನತೆಗೆ ತಕ್ಕಂತೆ ಮಾತನಾಡಿ ಸಮಾರಂಭದಲ್ಲಿದ್ದ ಮಹಿಳೆಯರಿಗೆ ಧೈರ್ಯ ತುಂಬಿದರು.