ಆಪರೇಷನ್ ಕೆಲಸವನ್ನು ಸ್ವತಃ ಸಿಎಂ ಮಾಡುತ್ತಿದ್ದಾರೆ: ಸಿದ್ದು ಟ್ವೀಟ್ಗೆ ಬಿಎಸ್ವೈ ತಿರುಗೇಟು
ಮಾಜಿ ಸಿಎಂ ಸಿದ್ದರಾಮಯ್ಯನವರ ಟ್ವೀಟ್ಗೆ ಶಿವಮೊಗ್ಗದಲ್ಲಿ ಬಿಎಸ್ವೈ ತಿರುಗೇಟು ನೀಡಿದರು. ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿಲ್ಲ. ಮಾಧ್ಯಮದಲ್ಲಿ ಬರುತ್ತಿರುವುದು ಸರಿಯಿಲ್ಲ. ಜಾರಕಿಹೊಳಿಯವರು ಮಂತ್ರಿ ಸ್ಥಾನ ಕಳೆದುಕೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಮುಂದಿನ ನಡೆ ಏನು ಎಂಬುದು ಅವರಿಗೇ ಗೊತ್ತು ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಹೊಸ ವರ್ಷದ ಶುಭಾಷಯ ತಿಳಿಸಲು ಹೋಗಿದ್ದೆ. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಬರುವ ಕುರಿತು ಮಾತನಾಡಿದ್ದೇನೆ. ಅವರು ಪ್ರಚಾರಕ್ಕೆ ಬಂದರೆ ಪಕ್ಷಕ್ಕೆ ಅನುಕೂಲವಾಗುತ್ತದೆ. ನಾನು ಸುತ್ತೂರು ಶಿವಯೋಗಿಗಳ 1059 ನೇ ಜಯಂತಿ ಕಾರ್ಯಕ್ರಮಕ್ಕಾಗಿ ಒಂದು ವಾರ ಶಿವಮೊಗ್ಗದಲ್ಲೇ ಇರುತ್ತೇನೆ ಎಂದರು.
ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ವಿಚಾರದಲ್ಲಿ ಕೇರಳ ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಗಲಭೆ ಉಂಟಾಗಿ ಎರಡು ಸಾವುಂಟಾಗಿದೆ ಎಂದು ದೂರಿದರು.
ಇನ್ನು ಡಿಸಿಎಂ ಪರಮೇಶ್ವರ್ ಅವರು ಬ್ರಿಡ್ಜ್ ಮಾಡಲು ಮುಂದಾಗಿದ್ದಾರೆ. ಸ್ಟೀಲ್ ಬ್ರಿಡ್ಜ್ಗೆ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿಯವರೇ ಈಗ ಸುಮ್ಮನಿದ್ದಾರೆ. ಯಾವುದೂ ಬೇಡವೋ ಅದನ್ನು ಮಾಡಲು ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಲಮನ್ನಾ ವಿಚಾರದಲ್ಲಿ ಸಿಎಂ ದಿನಕ್ಕೊಂದು ಹೇಳಿಕೆ ನೀಡಿ ಗೊಂದಲವನ್ನುಂಟು ಮಾಡುತ್ತಿದ್ದಾರೆ. ಆದ್ರೆ ಯಾರಿಗೂ ಇನ್ನೂ ಸಾಲ ಮನ್ನಾ ಆಗಿಲ್ಲ. ಸಿಎಂ ಭೇಟಿ ನೀಡಿದ ಜಿಲ್ಲೆಯಲ್ಲಿನ ಕೆಲ ರೈತರಿಗೆ ಮಾತ್ರ ಸಾಲ ಮನ್ನಾ ಆಗಿದೆ. ಸರ್ಕಾರ 156 ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಿದೆ. ಎಲ್ಲೂ ಕೂಡ ಇನ್ನೂ ಗೋ ಶಾಲೆ ತೆರೆದಿಲ್ಲ. ಸರ್ಕಾರ ಇದಕ್ಕೆ ಕೇವಲ 50 ಲಕ್ಷ ಬಿಡುಗಡೆ ಮಾಡಿದೆ, ಇದು ಸಾಕಾಗುವುದಿಲ್ಲ. ರೈತರು ಭತ್ತ ಮಾರಿದ ಮೇಲೆ ಭತ್ತ ಖರೀದಿ ಕೇಂದ್ರ ತೆರೆದಿದೆ. ಇದುವರೆಗೂ ಭತ್ತ ಖರೀದಿ ಕೇಂದ್ರದಲ್ಲಿ ಒಂದು ಕ್ವಿಂಟಾಲ್ ಭತ್ತ ಖರೀದಿಯಾಗಿಲ್ಲ ಎಂದರು.