ವೆಂಕಟಮ್ಮ ಎಂಬಾಕೆ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ಇದರ ಹಿಂದೆ ಕಿಡ್ನಿ ಮಾರಾಟ ಜಾಲ ಕುರಿತು ಆಕೆಯ ಪತಿ ಮಳವಳ್ಳಿ ಪೊಲೀಸರಿಗೆ ದೂರು ನೀಡಿದ್ದ ಎನ್ನಲಾಗಿದೆ. ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಮಳವಳ್ಳಿ ಪಟ್ಟಣದ ತಾರಾ ಎಂಬಾಕೆಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಹಲವು ವಿಚಾರಗಳು ಪತ್ತೆಯಾಗಿವೆ. ಹಲವಾರು ಕಿಡ್ನಿಗಳನ್ನು ವಿದೇಶದಲ್ಲೂ ಮಾರಾಟ ಮಾಡಿರುವ ಆತಂಕಕಾರಿ ವಿಚಾರ ಬೆಳಕಿಗೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವತಃ ತಾರಾ 2015ರಲ್ಲಿ ತನ್ನ ಕಿಡ್ನಿಯನ್ನು ಮೈಸೂರಿನಲ್ಲಿ ನೀಡಿದ್ದರೆ, ಆಕೆಯ ಪತಿ ನಾಗೇಂದ್ರ ಶ್ರೀಲಂಕಾದಲ್ಲಿ ಮಾರಿಕೊಂಡಿರುವ ಬಗ್ಗೆ ಮಾಹಿತಿಯನ್ನು ಈಕೆ ಹೊರಹಾಕಿದ್ದಾಳೆ. ಪತಿ ಕಿಡ್ನಿ ಮಾರಾಟದ ಬಗ್ಗೆ ವೈದ್ಯರು ಪತ್ತೆ ಹಚ್ಚಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಈಕೆಯ ಸಹೋದರಿಯೂ ಸಿಂಗಪುರದಲ್ಲಿ ಕಿಡ್ನಿಯನ್ನು ಮಾರಿದ ಭಯಾನಕ ವಿಚಾರವನ್ನು ಬಾಯ್ಬಿಟ್ಟಿದ್ದಾಳಂತೆ. ಇವರ ಜೊತೆಗೆ ಮತ್ತಷ್ಟು ಮಂದಿಯೂ ವಿದೇಶದಲ್ಲಿ ಸೇರಿದಂತೆ ದೇಶಾದ್ಯಂತ ಕಿಡ್ನಿಯನ್ನು ಮಾರಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ತಾರಾ ಸೇರಿದಂತೆ ಈಕೆಯ ಜೊತೆ ಇದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಹಿಂದೆ ತಂಡದ ಕಾರ್ಯಾಚರಣೆ:
ವೆಂಕಟಮ್ಮ ಪ್ರಕರಣ ಕುರಿತು ಈಗಾಗಲೇ ತಾರಾ, ಕಿಡ್ನಿ ಗೋಪಾಲ್, ಜವರಯ್ಯ, ರಾಜು ಹಾಗೂ ತಿಮ್ಮಯ್ಯ ಎಂಬುವರನ್ನು ಬಂಧಿಸಲಾಗಿದ್ದು, ಇವರೆಲ್ಲಾ ಕೂಲಿ ಕೆಲಸಗಾರರೇ ಆಗಿದ್ದಾರೆ. ಇನ್ನು ವಿಚಾರಣೆ ನಡೆಸಿದಾಗ ಇದರ ಹಿಂದೆ ದೊಡ್ಡ ಜಾಲವೇ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಎಲ್ಲರನ್ನೂ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಪ್ರಕರಣ ಬಯಲಿಗೆ ಬಂದಿದ್ದು ಹೀಗೆ:
ವೆಂಕಟಮ್ಮ ಸಾವಿನ ಹಿಂದೆ ಕಿಡ್ನಿ ಜಾಲದ ಕೈವಾಡದ ದೂರು ದಾಖಲಾದ ಕೂಡಲೇ ಮಳವಳ್ಳಿ ಪೊಲೀಸರು ತನಿಖೆಯ ಕೈಗೊಂಡರು. ತಾರಾಳನ್ನು ಬಂಧಿಸಿದ ನಂತರ, ಇದೇ ರೀತಿ ಇನ್ನಿಬ್ಬರು ಆರೋಪಿಗಳೂ ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ತಾರಾ ಕಮಿಷನ್ ಆಸೆಗಾಗಿ ಈ ಕಾರ್ಯಕ್ಕೆ ಇಳಿದಿದ್ದಳು. ಹಾಗಾಗಿ ವೆಂಕಟಮ್ಮ ಬಳಿ 2.40 ಲಕ್ಷ ರೂಪಾಯಿಯನ್ನು ಕಮಿಷನ್ ಪಡೆದುಕೊಂಡಿದ್ದಳು. ಆದರೆ ಬಿಗಿಯಾದ ಕಾನೂನಿನಿಂದ ವೆಂಕಟಮ್ಮಗೆ ತಾರಾಳ ಕಿಡ್ನಿ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವೆಂಕಟಮ್ಮ ಕಮಿಷನ್ ನೀಡಲು ಮಾಡಿದ್ದ ಸಾಲಕ್ಕೆ ಬಡ್ಡಿ ಕಟ್ಟಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಪ್ರಕರಣ ದಾಖಲಿಸಿಕೊಂಡಿರುವ ಮಳವಳ್ಳಿ ಪೊಲೀಸರು, ಬಂಧಿಸಿರುವ ಆರೋಪಿಗಳ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಕಿಡ್ನಿ ಜಾಲ ಪತ್ತೆಯಿಂದ ಮಂಡ್ಯ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ.