ಹೌದು...,ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ. ಕರಿ ಕೋರಿಯೊಂದು ಕಳೆದ 5 ತಿಂಗಳಿಂದ ಜನರಲ್ಲಿ ಆತಂಕ ಮೂಡಿಸಿತ್ತು. ಇದರಿಂದ ಜನ ಹೊರಗೆ ಓಡಾಡಲು ಬೆಚ್ಚಿ ಬೀಳುತ್ತಿದ್ದರು. ಟ್ರ್ಯಾಕ್ಟರ್ ಓಡಿಸೋರನ್ನು ಕಂಡ್ರೆ ಸಾಕು ಮಂಗ ದಾಳಿ ಮಾಡ್ತಿತ್ತು. ಇಷ್ಟೆಲ್ಲ ಆತಂಕ ಮೂಡಿಸಿದ್ದ ಕೋತಿ ಕೊನೆಗೂ ಬಂಧಿಯಾಗಿದೆ.
ಈ ಕರಿ ಕೋತಿಯಿಂದ ಕಚ್ಚಿಸಿಕೊಂಡ ಎಷ್ಟೋ ಜನ ಟ್ರ್ಯಾಕ್ಟರ್ ಚಾಲಕರು ಗದಗದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ವಾಪಸ್ಸಾಗಿ ಟ್ರ್ಯಾಕ್ಟರ್ ಓಡಿಸೋದನ್ನೇ ಬಿಟ್ಟಿದ್ರು. ಆದ್ದರಿಂದ ಈ ಕೋತಿಯನ್ನು ಹಿಡಿಯೋಕೆ, ಒಂದು ತಂಡವನ್ನು ಕರೆಸಿದ ಗ್ರಾಮಸ್ಥರ ಪ್ರಯತ್ನ ಫಲ ನೀಡ್ತು. ತಾವೇ ಸ್ವಂತ ಹಣದಲ್ಲಿ ಕೋತಿ ಸೆರೆಹಿಡಿಯೋರನ್ನು ಕರೆಸಿ ಅದಕ್ಕೆ ಗ್ರಾಮಸ್ಥರು ಕಡಿವಾಣ ಹಾಕಿದ್ದಾರೆ.
ಜನರು ಕೋತಿ ಹಿಡಿಯೋರನ್ನು ಕರೆಸಿದ್ದಾರೆ ಎನ್ನುವ ವಿಚಾರ ತಿಳಿಯುತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಯೂ ಸಹ ಅವರ ನರವಿಗೆ ಬಂದಿತ್ತು. ಆದ್ರೆ ಅಷ್ಟರಲ್ಲಿ ಈ ಡೆಡ್ಲಿ ಮಂಕಿ ಜೊತೆಗೆ ಇನ್ನೂ 5 ಕೋತಿಗಳನ್ನು ಸೆರೆಹಿಡಿಯಲಾಗಿತ್ತು. ದೊಡ್ಡ ಬೋನು ಇಟ್ಟು, ಅದ್ರಲ್ಲಿ ಹಣ್ಣು ತರಕಾರಿಗಳನ್ನು ಹಾಕಿ, ಕೋತಿಗಳನ್ನು ಸೆರೆಹಿಡಿಯಲಾಗಿದೆ. ಈಗ ಸೆರೆಸಿಕ್ಕಿರೋ ಇವನ್ನು ಒಯ್ದು, ಊರಿಂದ ದೂರದ ನಿರ್ಜನ ಪ್ರದೇಶದಲ್ಲಿ ಬಿಡುತ್ತೇವೆ ಎಂದು ಕೋತಿ ಹಿಡಿದವರು ತಿಳಿಸಿದ್ರು.
ಕೋತಿ ಕಾಟದಿಂದ ಹೈರಾಣಾಗಿದ್ದ ಅಡವಿಸೋಮಾಪುರ ಗ್ರಾಮಸ್ಥರೀಗ ಅಬ್ಬಬ್ಬಾ ಸದ್ಯ ಕೋತಿ ಸಿಕ್ತಲ್ಲ ಸಾಕು ಎನ್ನುತ್ತಿದ್ದಾರೆ. ಹಲವು ಜನರಿಗೆ ಕಚ್ಚಿ ಗಾಯ ಮಾಡಿದ್ದ ಕೋತಿ ಈಗ, ತನ್ನ ಕುಟುಂಬದ ಜೊತೆ ಸೆರೆಸಿಕ್ಕಿದ್ದಂತೂ ಗ್ರಾಮಸ್ಥರನ್ನು ಸಮಾಧಾನಗೊಳ್ಳುವಂತೆ ಮಾಡಿದೆ. ಆದ್ರೆ ಕೋತಿ ಕೇವಲ ಟ್ರ್ಯಾಕ್ಟರ್ನ್ನು ಕಂಡ್ರೆ ಮಾತ್ರ ಅಟ್ಯಾಕ್ ಮಾಡ್ತಿದ್ದದ್ದು ಯಾಕೆ ಅನ್ನೋದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.