ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಸಿಕ್ಕಿಲ್ಲ ಮುಕ್ತಿ... ಜೀವ ಕೈಯಲ್ಲಿಡಿದು ಸೇತುವೆ ಮೇಲೆ ಪಯಣ
ಮೂಡಿಗೆರೆ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶ ಸಂಸೆ ಸಮೀಪದ ಗುಳ್ಯ ನಿವಾಸಿಗಳು ಐದಾರು ದಶಕಗಳಿಂದ ಬಂಡೆಗಳ ಮಧ್ಯೆ ಸೋಮಾವತಿ ನದಿ ಮೇಲೆ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಸೇತುವೆ ನಿರ್ಮಿಸಿಕೊಡಿ ಎಂದು ಎಷ್ಟೇ ಮನವಿ ಮಾಡಿದರು ಸಫಲವಾಗಿಲ್ಲ. ಇದರ ಸಲುವಾಗಿ ನೂರಾರು ಹೋರಾಟ ಮಾಡಿದ್ದರು ಪ್ರಯೋಜನಕ್ಕೆ ಬಂದಿಲ್ಲ. ಸ್ಥಳಕ್ಕೆ ಬರೋ ಹಿರಿಯ ಅಧಿಕಾರಿಗಳು ಫೋಟೋ ಹೊಡೆದು ಕೊಂಡು ಹೋಗಿದ್ದೇ ಲಾಭ ಅಂತಾರೆ ಗ್ರಾಮಸ್ಥರು.
ಇನ್ನು ಎಂಎಲ್ಎ, ಜಿ.ಪಂ. ಹಾಗೂ ತಾ.ಪಂ. ಸದಸ್ಯರನ್ನಂತು ಕೇಳೋದೇ ಬೇಡ, ಅವರು ಸುಳಿಯುವುದೇ ಆಗೊಮ್ಮೆ-ಈಗೊಮ್ಮೆ, ಇತ್ತ ನಕ್ಸಲರು ಗ್ರಾಮಕ್ಕೆ ಬಂದ್ರೆ ನಮ್ಮನ್ನು ಮೇಲಿಂದ ಮೇಲೆ ವಿಚಾರಣೆ ಮಾಡುತ್ತಾರೆ ಎಂಬ ನೋವಿನ ಮಾತು ಗ್ರಾಮಸ್ಥರದ್ದು.
ಕಲ್ಲು-ಮಣ್ಣಿನ ರಸ್ತೆಯೊಂದಿದ್ದು, ಆ ಮುಖೇನ ಸುತ್ತಿ ಬಳಸಿ ತಲುಪುವವರೆಗೆ ರೋಗಿಗಳು, ಶಾಲಾ-ಮಕ್ಕಳಿಗೆ ಸಂಕಷ್ಟವೋ ಸಂಕಷ್ಟ. ಹಾಗಾಗಿ, ಇಲ್ಲಿನ ಜನ ಈ ಕೃತಕ ಸೇತುವೆಯನ್ನೇ ಆಶ್ರಯಿಸಿದ್ದಾರೆ. ಆದ್ದರಿಂದ ಈ ಸೋಮಾವತಿ ನದಿಗೆ ನಡೆದಾಡಲಿಕ್ಕಷ್ಟೆ ಒಂದು ತೂಗುಸೇತುವೆ ನಿರ್ಮಿಸಿ ಕೊಡಿ ಎಂದು ದಶಕಗಳಿಂದಲೂ ಮನವಿ ಮಾಡುತ್ತಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಜನ ಮರದ ಟೊಂಗೆಗಳನ್ನು ಬಳಸಿ ತಾವೇ ಕೃತಕ ಸಂಕ ನಿರ್ಮಿಸಿಕೊಂಡು ಜೀವ ಕೈಲಿಡಿದುಕೊಂಡು ನದಿ ದಾಟುತ್ತಿದ್ದಾರೆ.
10 ವರ್ಷಗಳ ಹಿಂದೆ ಇದೇ ಜಾಗದಲ್ಲಿ ಸೇತುವೆ ಕಟ್ ಆಗಿ ಬಂಡೆಗಳ ಮೇಲೆ ಬಿದ್ದು ಓರ್ವ ಸಾವನ್ನಪ್ಪಿದ್ದಾನೆ. ಅಂದೇ ಸೇತುವೆ ನಿರ್ಮಿಸಿಕೊಡುತ್ತೇವೆ ಅಂದಿದ್ದ ಸರ್ಕಾರ ಇಂದಿಗೂ ಅತ್ತ ತಲೆ ಹಾಕಿಲ್ಲ. ಮನವಿ ಮಾಡಿದ್ರು ಕ್ಯಾರೆ ಅಂತಿಲ್ಲ ಎಂದು ಸ್ಥಳೀಯರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಈ ಸೇತುವೆ ಮೇಲೆ ಸಾಗುತ್ತಿರೋ ಇವರ ಭಯದ ಜೀವನಕ್ಕೆ ಮುಕ್ತಿ ಯಾವಾಗ ದೊರೆಯುತ್ತದೆ ಎಂದು ಕಾದು ನೋಡಬೇಕಿದೆ.