ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ತೊರವಿಯಲ್ಲಿರುವ ಜ್ಞಾನಶಕ್ತಿ ಆವರಣದಲ್ಲಿ ನಡೆಯಿತು. ಈ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಹಿಳೆಯರಿಗೆ ಪದವಿ ಪ್ರದಾನ ಮಾಡುತ್ತಿದ್ದರೆ ಇತ್ತ ವೇದಿಕೆಯ ಮೇಲೆ ಆಸೀನರಾಗಿದ್ದ ಗಣ್ಯರು ನಿದ್ದೆಗೆ ಜಾರಿದ್ದರು.
ಕೆಲವು ಜನ ಸಿಂಡಿಕೇಟ್ ಸದಸ್ಯರು ಗಡದ್ದಾಗಿ ನಿದ್ದೆ ಮಾಡುತ್ತಿದ್ದರೆ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಮತ್ತು ಬೆಳಗಾವಿ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್, ವಿಶ್ವವಿದ್ಯಾಲಯದ ಕುಲಸಚಿವ ಡಾ. ಶ್ರೀನಾಥ, ಸದಸ್ಯರಾದ ಸತ್ಯಾನಂದ ಪಾತ್ರೋಟ ಸೇರಿದಂತೆ ಇತರೆ ಮಹಿಳಾ ಸದಸ್ಯರೂ ಈ ಸಂದರ್ಭದಲ್ಲಿ ನಿದ್ದೆಗೆ ಜಾರಿದ್ದರು.
ಅಷ್ಟೇ ಅಲ್ಲ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಹಾಗೂ ಬೆಳಗಾವಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ವಿವೇಕರಾವ್ ಪಾಟೀಲ ಘಟಿಕೋತ್ಸವದ ಮುಕ್ತಾಯದ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಡುವಾಗ ರಾಷ್ಟ್ರಗೀತೆಗೆ ಅವಮಾನ ಮಾಡಿದ ಘಟನೆಯೂ ನಡೆದಿದೆ.
ವೇದಿಕೆಯ ಮೇಲಿದ್ದ ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುತ್ತಿದ್ದರೆ, ವಿವೇಕರಾವ್ ಪಾಟೀಲ್ ಬಾಯಲ್ಲಿ ಚೀವಿಂಗ್ ಗಮ್ ಜಗಿಯುತ್ತ ನಿಂತಿದ್ದರು ಎನ್ನಲಾಗಿದೆ.