ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯ ಗಳಿಸಿದ ಗೀತಾ ಮಹದೇವ ಪ್ರಸಾದ್, ಕಳಲೆ ಕೇಶವಮೂರ್ತಿಯವರ ಪ್ರಮಾಣ ವಚನ ಸ್ವೀಕಾರದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಯು ಮುಖಂಡ, ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದರು.
ದೇಶದ ಎಲ್ಲಾ ಶಕ್ತಿಗಳು ಕೋಮುವಾದಿ ಶಕ್ತಿಗಳ ವಿರುದ್ಧ ಒಂದಾಗಬೇಕು. ಬಿಜೆಪಿಯೇತರ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಕೋಮವಾದಿ ವಿರುದ್ಧದ ಶಕ್ತಿಗಳು ಒಂದಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಸಂಪುಟ ವಿಸ್ತರಣೆ:
ನವದೆಹಲಿಯಲ್ಲಿ ಭಾನುವಾರ ನೀತಿ ಆಯೋಗದ ಸಭೆ ಇದೆ. ಅದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದು, ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸುತ್ತೇನೆ. ಸದ್ಯ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಉಪ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಬೇಕಾಗಿತ್ತು. ಇಂದು ನಾನು ಮತ್ತು ದೇವೇಗೌಡರು ಬಾರ್ಕೂರಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಾಗಿದ್ದು, ಕಾರಣಾಂತರಗಳಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದರು.
ಹೈಕಮಾಂಡ್ಗೆ ಬಿಟ್ಟದ್ದು:
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಸುದ್ದಿಗಾರರ ಪ್ರಶ್ನೆಗೆ ಸಿದ್ದರಾಮಯ್ಯನವರು ಉತ್ತರ ನೀಡಿದರು.
ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಎಂ.ಕೃಷ್ಣಪ್ಪ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಇದರಲ್ಲಿ ಅವರ ಪಾತ್ರವೇನಿದೆ. ಮಧ್ಯವರ್ತಿಗಳ ತಪ್ಪಿಗೆ ಅವರು ಹೊಣೆಯಾಗಲು ಸಾಧ್ಯವೇ? ಅವರದ್ದೇನೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.