ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇಲ್ಲಿದೆ ಮಾರ್ಗ...
ಆತ್ಮವಿಶ್ವಾಸ ಹೆಚ್ಚಲು ಏನು ಮಾಡಬೇಕು?
ಅಧ್ಯಯನಗಳ ಪ್ರಕಾರ, ಸರಿಯಾಗಿ ದೇಹಕ್ಕೆ ಹೊಂದಿಕೆಯಾಗುವ ಉಡುಪು ಧರಿಸುವಿಕೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅದೇ ರೀತಿ ನಾವು ಇಷ್ಟ ಪಡುವ ಉಡುಪು ಕೂಡ ನಮ್ಮ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ನೆರವಾಗುತ್ತದೆ. ಜೊತೆಗೆ ನಾವು ಇಷ್ಟ ಪಡುವ ವ್ಯಕ್ತಿಗಳ ಎದುರಲ್ಲಿ, ಖುಷಿಯಿಂದ ಮಾಡುವ ಕೆಲಸದಲ್ಲಿ, ಕಂಫರ್ಟೇಬಲ್ ಆದ ಉಡುಪು ಮತ್ತು ಮೇಕಪ್ನಲ್ಲಿದ್ದಾಗ ಆತ್ಮವಿಶ್ವಾಸ ಎಂಬುದು ಹೆಚ್ಚಾಗಿರುತ್ತದೆ. ಹಾಗಾಗಿ, ನಿಮಗೆ ಇಷ್ಟವಾಗುವ ರೀತಿಯಲ್ಲಿ ಸಿದ್ಧವಾಗಿ ಕೆಲಸಕ್ಕೆ ಅಥವಾ ಕಾರ್ಯಕ್ರಮಗಳಿಗೆ ಹೊರಡಿ.
ಬಹುತೇಕ ಜನರು ನಾವು ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುತ್ತಿದ್ದೇವೆ, ಇದರಿಂದ ನಮಗೂ ಒಳ್ಳೆಯದಾಗುತ್ತದೆ ಎಂದು ತಿಳಿದಿರುತ್ತಾರೆ. ಇನ್ನೊಬ್ಬರಿಗೆ ನೆರವು ನೀಡುವುದರಿಂದ ನಮ್ಮ ಆತ್ವವಿಶ್ವಾಸ ಹೆಚ್ಚುತ್ತದೆ ಎಂದು ಬಹುತೇಕ ಅಧ್ಯಯನಗಳು ತಿಳಿಸಿವೆ. ಅದರ ಅರ್ಥವೆಂದರೆ ನಿಮ್ಮ ವ್ಯಾಪ್ತಿಯನ್ನು ಮೀರಿ ನೀವು ಹೋಗಬೇಕೆಂದು ಏನೂ ಅಲ್ಲ. ಸಾಮಾಜಿಕ ಸ್ವಯಂ ಸೇವಕರನ್ನು ಆಯೋಜಿಸುವ ಮೂಲಕ ಇಲ್ಲವೇ ಸಹೋದ್ಯೋಗಿಗಳಿಗೆ ಕೆಲಸ ಸೇರಿದಂತೆ ಹಲವು ವಿಷಯಗಳಲ್ಲಿ ನೆರವು ನೀಡುವ ಮೂಲಕ ನಿಮ್ಮ ಮೇಲೆ ನಿಮಗೆ ವಿಶ್ವಾಸ ಹೆಚ್ಚುವಂತೆ ಮಾಡಿಕೊಳ್ಳಬಹುದು.
ಶಾರೀರಿಕ ವ್ಯಾಯಾಮವನ್ನು ನಿಯಮಿತವಾಗಿ ಮಾಡುವ ಮೂಲಕ ಮಾನಸಿಕ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಸಾಧ್ಯವಿದೆ. ಇದರಿಂದ ಶಾರೀರಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ನೆಮ್ಮದಿ ದೊರಕುವುದರಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ.
ಸ್ವಲ್ಪ ಕಾಲವಾದರೂ ಕುಟುಂಬದವರೊಂದಿಗೆ ಕಾಲಕಳೆಯುವುದರ ಜೊತೆಗೆ ಮನೆಯ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದರ ಮೂಲಕವೂ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲಿ ಸಣ್ಣಪುಟ್ಟ ಜವಾಬ್ದಾರಿಯನ್ನಾದರೂ ತೆಗೆದುಕೊಂಡು ಯಶಸ್ವಿಯಾಗಿ ನಿಭಾಯಿಸಿ. ಇದರಿಂದ ಸಮಸ್ಯೆ ಎದುರಿಸಲು ನೀವು ಸಮರ್ಥರು ಎಂಬ ಭಾವ ಮೂಡುತ್ತದೆ.
ನಿಮ್ಮ ಅನನ್ಯ ಸಾಮರ್ಥ್ಯಗಳ ಪಟ್ಟಿಯನ್ನು ತಯಾರಿಸಿ. ಅದರಲ್ಲಿ ನೀವು ಯಾವ ವಿಷಯದ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತೀರಿ ಎಂಬುದನ್ನು ಉಲ್ಲೇಖಿಸಬೇಕು. ಬಳಿಕ ನಿಮ್ಮ ಬರವಣಿಗೆ ಸಾಮರ್ಥ್ಯ ಹಾಗೂ ಯಶಸ್ಸು ಪಡೆದ ಸಂದರ್ಭದ ಬಗ್ಗೆ ಉಲ್ಲೇಖವಿರಲಿ. ಇದನ್ನು ನಿಯಮಿತವಾಗಿ ಓದುವ ಮೂಲಕ ನಿಮ್ಮಲ್ಲಿರುವ ಲೋಪ ದೋಷಗಳ ಕುರಿತು ಅರಿವು ಪಡೆಯುವುದರಿಂದ ಉತ್ತಮ ಉದ್ಯೋಗ, ಭವಿಷ್ಯ ಪಡೆಯಲು ಸಾಧ್ಯವಾಗುತ್ತದೆ.