ಶಿವಮೊಗ್ಗ ಜಿಲ್ಲೆಯ ಈ ಕುಪ್ಪಳ್ಳಿ ಎಂಬ ಗ್ರಾಮ, ಕುವೆಂಪು ಅವರಂತಹ ಕವಿಯನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಈಗ ಈ ಕವಿಯ ಮನೆ ಕುವೆಂಪು ವಿಚಾರಧಾರೆ , ಸರಳ ಜೀವನಶೈಲಿಗೆ ಉದಾಹರಣೆಯಾಗಿದೆ, ಜೊತೆಗೆ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಾ, ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಕವಿಮನೆ ಕುಪ್ಪಳ್ಳಿಯ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಎಂಬ ಗ್ರಾಮವೇ ಕುವೆಂಪು ಹುಟ್ಟಿದ ಸ್ಥಳ. ಈ ಸ್ಥಳಕ್ಕೆ ತಲುಪಲು ಶಿವಮೊಗ್ಗದಿಂದ ಸುಮಾರು 80 ಕಿಮೀ ಪಯಣಿಸಬೇಕಾಗುತ್ತದೆ. ಅಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನದ ವತಿಯಿಂದ ಕುವೆಂಪು ಅವರ ಮನೆ, ಅವರ ವಸ್ತುಗಳನ್ನು ಮ್ಯೂಸಿಯಮ್ ರೀತಿಯಲ್ಲಿ ನಿರ್ಮಾಣ ಮಾಡಿ ಸುರಕ್ಷಿತವಾಗಿ ಇಡಲಾಗಿದೆ.
ಕವಿಮನೆ ಶತಮಾನದ ಹಿಂದಿನ ಜೀವನಶೈಲಿಗೆ ಉದಾಹರಣೆ ಎನ್ನಬಹುದು. ಆಗ ಬಳಸಲಾಗುತ್ತಿದ್ದ ಪಾತ್ರೆಗಳು, ಕುವೆಂಪು ಅವರ ಕೋಟ್, ತೂಗು ಉಯ್ಯಾಲೆ, ಕುವೆಂಪು ಅವರ ಮದುವೆ ಮಂಟಪ, ಹಳೆಯ ಫೋಟೊಗಳು, ಪುಸ್ತಕಗಳು, ಪುರಸ್ಕಾರಗಳು, ಎಲ್ಲವನ್ನೂ ಸಂರಕ್ಷಿಸಿ ಇಡಲಾಗಿದೆ. ಮಲೆನಾಡು ಮಾದರಿಯ ಈ ಮನೆಯೊಳಗೆ ನಡೆದಾಡಿದರೆ ಹಳೆಯ ಕಾಲದ ಜೀವನ ಪದ್ದತಿಯು ಕಣ್ಣಿನ ಎದುರೇ ಬಂದಂತೆ ಭಾಸವಾಗುತ್ತದೆ. 2 ಅಂತಸ್ತಿನ ಈ ಹಂಚಿನ ಮನೆಯ ಕಿಟಕಿಗಳಿಂದ ನೋಡಿದರೆ, ದೂರದ ವರೆಗಿನ ಬೆಟ್ಟ, ತೆಂಗು ಅಡಿಕೆ ತೋಟಗಳು ಕಾಣಲು ಸಿಗುತ್ತವೆ.
ಕವಿಶೈಲ: ಕುವೆಂಪು ಅವರ ಮನೆಯ ಬಳಿಯೇ ಕವಿಶೈಲ ಎಂಬ ಸ್ಮಾರಕವಿದೆ. ಇಂಗ್ಲಾಂಡ್ನ ಸ್ಟೋನ್ಹೆಂಜ್ ಮಾದರಿಯಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗಿದ್ದು ವೃತ್ತಾಕಾರದಲ್ಲಿ ದೊಡ್ಡ ಕಲ್ಲುಗಳ್ನು ಇರಿಸಿ ಮಧ್ಯದಲ್ಲಿ ಕುವೆಂಪು ಅವರ ಸಮಾಧಿಯನ್ನು ನಿರ್ಮಿಸಲಾಗಿದೆ. ಸಂಜೆಯ ಸಮಯದಲ್ಲಿ ಇಲ್ಲಿ ತಂಪಾದ ಗಾಳಿ ಸಿಗುವುದರಿಂದ ಒಂದು ಒಳ್ಳೆಯ ವಿಹಾರಕ್ಕೆ ಚೆನ್ನಾಗಿದೆ.
ಸ್ಮಾರಕ ಭವನ: ಕುಪ್ಪಳ್ಳಿಯಲ್ಲೇ ಸ್ಮಾರಕಭವನವನ್ನು ನಿರ್ಮಿಸಲಾಗಿದೆ. ಈ ಭವನದ ಪಕ್ಕದಲ್ಲಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಸಮಾಧಿ ಇದೆ. ಸ್ಮಾರಕ ಭವನದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿ ಪೂರ್ಣಚಂದ್ರತೇಜಸ್ವಿ ಅವರು ಕ್ಲಿಕ್ಕಿಸಿದ ಫೋಟೋ, ಪೇಂಟಿಗ್, ಜೊತೆಗೆ ಕುವೆಂಪು ಕುಟುಂಬದವರ ಭಾವಚಿತ್ರಗಳನ್ನು ಇರಿಸಲಾಗಿದೆ. ಇಲ್ಲಿ ಒಮ್ಮೆ ಭೇಟಿ ನೀಡಿದರೆ ಕುವೆಂಪು ಕುಟುಂಬದ ಸಂಪೂರ್ಣ ಪರಿಚಯ ಸಿಗುತ್ತದೆ.
ನವಿಲುಕಲ್ಲು: ಕುಪ್ಪಳ್ಳಿಯ ಕವಿಮನೆ ಹತ್ತಿರವೇ ಇರುವ ಸಿಬ್ಬಲ್ಗುಡ್ಡ ಎಂಬ ಪ್ರದೇಶದಲ್ಲೇ, ಕುವೆಂಪು ಅವರು ಜನಪ್ರಿಯ ಗೀತೆ ದೇವರು ರುಜು ಮಾಡಿದನು ಎಂಬ ಪದ್ಯವನ್ನು ಬರೆದಿದ್ದು, ಇಲ್ಲಿಂದ ಸೂರ್ಯಾಸ್ತ ಮತ್ತು ಸೂರ್ಯೋದಯದ ವಿಹಂಗಮ ನೋಟವನ್ನು ಕಾಣಬಹುದು.
ಹೀಗಾಗಿ ಜಿವನದಲ್ಲಿ ಒಮ್ಮೆಯಾದರೂ ಕುಪ್ಪಳ್ಳಿಗೆ ಭೇಟಿ ನೀಡಿ ಕುವೆಂಪು ಅವರ ಜೀವನ ಶೈಲಿ, ಮಲೆನಾಡಿನ ಸುಂದರ ಪರಿಸರವನ್ನು ಓದಿ ಬನ್ನಿ.