ಈ ಪ್ರದೇಶಗಳು ಪ್ರಶಾಂತವಾಗಿದ್ದು, ಅತ್ಯುದ್ಭುತ ನೈಸರ್ಗಿಕ ಸೊಬಗನ್ನು ಹೊಂದಿದೆ. ಜಗತ್ತಿನಲ್ಲಿರುವ ಅತ್ಯಂತ ಪ್ರಶಾಂತ ಮತ್ತು ಸುಂದರವಾಗಿರುವ ಗ್ರಾಮ ಮತ್ತು ನಗರಗಳ ಮಾಹಿತಿಗಳು ಇಲ್ಲಿವೆ.
ಮ್ಯಾಡಿಸನ್, ಅಮೆರಿಕಾ
ಸುಮಾರು ಇನ್ನೂರು ವರ್ಷಗಳ ಹಿಂದೆ ಪತ್ತೆಯಾದ ಈ ಪ್ರದೇಶಕ್ಕೆ ಅಮೆರಿಕದ ದಿವಂಗತ ಅಧ್ಯಕ್ಷ ಜೇಮ್ಸ್ ಮ್ಯಾಡಿಸನ್ ಅವರ ಹೆಸರಿಡಲಾಗಿದೆ. ಇದನ್ನು ಆ ದೇಶದ ಅತ್ಯಂತ ಸುಂದರ ನಗರ ಎಂದು ಪರಿಗಣಿಸಲಾಗಿದೆ. ನಾಗರಿಕ ಯುದ್ಧದ ಸಮಯದಲ್ಲಿ ಈ ಪ್ರದೇಶಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಏಕೆಂದರೆ ಸೇನಾಪಡೆಯು ಈ ನಗರದ ವಿಲಕ್ಷಣತೆ ಮತ್ತು ಪ್ರಾಚೀನತೆಯನ್ನು ಗಮನಿಸಿ ಅದನ್ನು ನಾಶ ಮಾಡಲು ಹಿಂದೇಟು ಹಾಕಿದರು ಎನ್ನಲಾಗುತ್ತಿದೆ. ಈಗ ಈ ನಗರದಲ್ಲಿರುವ ಐತಿಹಾಸಿಕ ಕೇಂದ್ರದಲ್ಲಿ ನೀವು ಅಮೆರಿಕಾದ ಇತಿಹಾಸಕ್ಕೆ ಸಂಬಂಧಿಸಿದ ಸಾಕಷ್ಟು ಮಾಹಿತಿಗಳನ್ನು ಪಡೆಯಬಹುದು.
ರೈನಿ, ನಾರ್ವೆ
ನಾರ್ವೆ ದೇಶದಲ್ಲಿರುವ ಅತ್ಯಂತ ಸುಂದರ ಗ್ರಾಮವಿದು. ಆ ದೇಶದ ಉತ್ತರ ಭಾಗದಲ್ಲಿರುವ ಲೊಫೆಟೆನ್ ದ್ವೀಪದ ಒಂದು ಭಾಗ. ಪರ್ವತಗಳಿಂದ ಸುತ್ತುವರಿದಿರುವ ಈ ಗ್ರಾಮದ ಹವಾಮಾನವೂ ಅತ್ಯಂತ ಆಹ್ಲಾದಕರವಾಗಿದೆ. ಪ್ರವಾಸಿಗರು ಇಲ್ಲಿ ಕಯಾಕಿಂಗ್ ಅಥವಾ ಹೈಕಿಂಗ್ ಮಾಡುತ್ತಾ ಗ್ರಾಮದ ಸುಂದರ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಬಹುದು.
ವೆಂಗೆನ್, ಸ್ವಿಜರ್ಲ್ಯಾಂಡ್
ಸ್ವಿಜರ್ಲ್ಯಾಂಡ್ನಲ್ಲಿರುವ ವೆಂಗೆನ್ ಎಂಬ ಪ್ರದೇಶಕ್ಕೆ ಪ್ರತಿವರ್ಷ ಚಳಿಗಾಲ ಮತ್ತು ಸೆಕೆಗಾಲದಲ್ಲಿ ಅಸಂಖ್ಯಾತ ಪ್ರವಾಸಿಗರು ಭೇಟಿ ಕೊಡುತ್ತಾರೆ. ಇದು ದಟ್ಟ ಹಸಿರಿನಿಂದ ಆವೃತವಾಗಿರುವ ಪರ್ವತಗಳು ಮತ್ತು ಪರ್ವತಗಳ ಮೇಲೆ ಹಾದು ಹೋಗುವಂತೆ ಕಾಣುವ ಮೋಡಗಳ ಮಧ್ಯೆ ನೆಲೆಸಿದೆ. ಸ್ಕೈಯಿಂಗ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ.
ಚಳಿಗಾಲದಲ್ಲಿ ಇಲ್ಲಿ ಸ್ಕೈಯಿಂಗ್ ಮಾಡಬಹುದು. ಈ ಪ್ರದೇಶದಲ್ಲಿ ಗಮನ ಸೆಳೆಯುವ ಅಂಶವೆಂದರೆ ಇಲ್ಲಿ ಕಾರುಗಳಿಗೆ ಪ್ರವೇಶವಿಲ್ಲ. ಇದರಿಂದಾಗಿ ಇಲ್ಲಿ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯಗಳು ಇಲ್ಲವೇ ಇಲ್ಲ ಎಂಬುವಷ್ಟು ಕಡಿಮೆಯಿದೆ. ಇಲ್ಲಿನ ಸ್ಥಳೀಯರು ಪ್ರಕೃತಿಯನ್ನು ತುಂಬಾ ಪ್ರೀತಿಸುತ್ತಾರೆ.