ಇದು ಬಂಟ್ವಾಳ ತಾಲೂಕಿನಲ್ಲಿರುವ ಗ್ರಾಮಾಂತರ ಪ್ರದೇಶ ವಾದ ನೆಟ್ಲ ಎಂಬಲ್ಲಿನ ಶಾಲೆ. ಈ ಶಾಲೆ ಇದೀಗ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಸರ್ಕಾರವೇನೋ ಈ ಶಾಲೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬಹುದಾದರೂ ಈ ಶಾಲೆಗೆ ಅದನ್ನು ಪಡೆದುಕೊಳ್ಳಲು ತಾಂತ್ರಿಕ ಸಮಸ್ಯೆ ಆಗಿದೆ. ಈ ಶಾಲೆಯ ಜಾಗ ಶಾಲೆಯ ಹೆಸರಿನಲ್ಲಿ ಇರದೆ ಅದೇ ಊರಿನ ವ್ಯಕ್ತಿಯ ಹೆಸರಿನಲ್ಲಿ ಇದೆ. ಈ ಕಾರಣಕ್ಕೆ ಶಾಲೆಯ ಅಭಿವೃದ್ಧಿಗೆ ಹಣವು ಮಂಜೂರ್ ಆಗುತ್ತಿಲ್ಲ.
ಇದಕ್ಕಾಗಿ ಜಾಗವನ್ನು ಶಾಲೆಯ ಹೆಸರಿನಲ್ಲಿ ಮಾಡಲು ಹಳೆ ವಿದ್ಯಾರ್ಥಿಗಳು ಅಭಿಯಾನ ಆರಂಭಿಸಿದ್ದಾರೆ. ಸಾರ್ವಜನಿಕ ಸಭೆ, ಸಮಾರಂಭ, ಯಾವುದಾದರೂ ಪ್ರದರ್ಶನಗಳು ಹೀಗೆ ಜನ ಸೇರುವಲ್ಲಿ ಹಳೆ ವಿದ್ಯಾರ್ಥಿಗಳು ಭಿಕ್ಷಾಂದೇಹಿ ಎನ್ನುತ್ತ ಹಣ ಸಂಗ್ರಹಿಸುತ್ತಿದ್ದಾರೆ. ನಮ್ಮ ಶಾಲೆ ಉಳಿಸಲು ಹತ್ತು ರೂಪಾಯಿ ಭಿಕ್ಷೆ ನೀಡಿ ಎಂದು ಬೇಡುವ ಮೂಲಕ ಶಾಲೆಯ ಜಾಗವನ್ನು ಖರೀದಿಸಲು ಹಣ ಒಟ್ಟು ಮಾಡುತ್ತಿದ್ದಾರೆ.
ಹಲವು ದಶಕಗಳ ಹಿಂದೆ ಈ ಶಾಲೆಯ ಜಾಗವನ್ನು ದಾನಿಯೊಬ್ಬರು ನೀಡಿದ್ದರು. ಆದರೆ ಅದು ದಾಖಲೆಗಳಲ್ಲಿ ನಮ್ಮದಾಗಿರಲಿಲ್ಲ. ಇದೀಗ ಆ ಜಾಗ ನೀಡಿದ ದಾನಿಯ ಕುಟುಂಬಿಕರು ಶಾಲೆಯ ಜಾಗ ನಮ್ಮ ಹೆಸರಿನಲ್ಲಿ ಇರುವುದರಿಂದ ಅದನ್ನು ನೀಡಲಾಗುವುದಿಲ್ಲ. ನಮ್ಮಿಂದ ಖರೀದಿಸಿದರೆ ಮಾತ್ರ ಶಾಲೆಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಕಾರಣಕ್ಕಾಗಿ ಅವರಿಂದ ಶಾಲೆಗೆ ಜಾಗವನ್ನು ಖರೀದಿಸಲು ಹಳೆ ವಿದ್ಯಾರ್ಥಿಗಳು ಭಿಕ್ಷೆಗೆ ನಿಂತಿದ್ದಾರೆ. ಶಾಲೆಗೆ ದೊಡ್ಡಮಟ್ಟದ ಅನುದಾನ ಬಾರದೆ ಇರುವುದರಿಂದ ಶಾಲೆಯ ಕಟ್ಟಡದ ರಿಪೇರಿ ಮಾಡಲಾಗುತ್ತಿಲ್ಲ. ಕುಸಿದು ಬೀಳುವ ಸ್ಥಿತಿಯಲ್ಲಿ ಇರುವ ಶಾಲೆಯನ್ನು ದುರಸ್ತಿ ಮಾಡಲು ಸಾಧ್ಯವಾಗದೆ ಇಲ್ಲಿ ಶಾಲೆಯ ಮಕ್ಕಳು ಅಪಾಯಕಾರಿ ರೀತಿಯಲ್ಲಿ ಕಲಿಯುತ್ತಿದ್ದಾರೆ.
ಸುತ್ತಲೂ ಆಂಗ್ಲ ಮಾಧ್ಯಮ ಶಾಲೆ ಇದ್ದರೂ ಈ ಶಾಲೆಗೆ ಸುಮಾರು 65ರಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ. ಇಲ್ಲಿನ ದುಸ್ಥಿತಿ ಯನ್ನು ನೋಡಿದ ಹಲವು ರಾಜಕಾರಣಿಗಳು ಅನುದಾನಗಳ ಘೋಷಣೆ ಮಾಡಿದ್ದಾರೆ. ಆದರೆ ಅದು ಯಾವುದು ಈ ಶಾಲೆಗೆ ಮುಟ್ಟಿಲ್ಲ. 1 ವರ್ಷದ ಹಿಂದೆ ಶಾಲೆಯ ಛಾವಣಿ ಕುಸಿದು ಬಿದ್ದು ದುರ್ಘಟನೆ ಸಂಭವಿಸಿತ್ತು. ಆದರೆ ಅದೃಷ್ಟವಶಾತ್ ಆ ಸಂದರ್ಭದಲ್ಲಿ ಮಕ್ಕಳು ಶಾಲೆಯ ಒಳಗೆ ಇರಲಿಲ್ಲ.
ಇನ್ಯಾವತ್ತು ಈ ರೀತಿಯ ದುರ್ಘಟನೆ ಆಗದಿರಲಿ ಎಂಬ ಪ್ರಾರ್ಥನೆಯೊಂದಿಗೆ ಮಕ್ಕಳನ್ನು ಇಲ್ಲಿಗೆ ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ ಈ ಸಮಸ್ಯೆ ಪರಿಹರಿಸಲು ಯಾವ ರಾಜಕಾರಣಿಗಳು , ಆಡಳಿತ ಮುಂದಾಗುತ್ತಿಲ್ಲ.ಹೀಗೆ ಭಿಕ್ಷಾಂದೇಹಿ ಎಂದು ಕೂರುತ್ತಾ ಹಳೆ ವಿದ್ಯಾರ್ಥಿಗಳು ಸುಮಾರು 7 ಸಾವಿರ ರೂ. ಸಂಗ್ರಹಿಸಿದ್ದಾರೆ. ಶಾಲೆಯ ಜಾಗದ ಮೌಲ್ಯ ಸುಮಾರು ಏಳು ಲಕ್ಷ ರೂ. ಸಂಗ್ರಹ ವಾಗಬೇಕಿದೆ. ಅದಕ್ಕಾಗಿ ಇನ್ನಷ್ಟು ವಿವಿಧ ಕಡೆ ಹಳೆ ವಿದ್ಯಾರ್ಥಿಗಳು ಯೋಜನೆಗಳನ್ನು ಹಾಕಿದ್ದಾರೆ. ಈ ರೀತಿ ಸಂಗ್ರಹಿಸಿದ ಹಣದಿಂದ ಶಾಲೆಯ ಜಾಗವನ್ನು ಖರೀದಿಸಿ ಶಾಲೆಗೆ ಹೊಸ ಕಟ್ಟಡವನ್ನು ಕಟ್ಟುವ ಕನಸನ್ನು ಕಂಡಿದ್ದಾರೆ.