ನಗರದ ದಿಡ್ಡಿಕೇರಿ ಓಣಿಯಲ್ಲಿ ಬೀಡಿ ಕಟ್ಟುವ ಕುಟುಂಬಗಳು ಹಾಗೂ ಕಾರ್ಮಿಕರೇ ಹೆಚ್ಚಾಗಿದ್ದು, ಅವರು ಮನೆಗಳಲ್ಲಿ ವಿದ್ಯುತ್ ಬಳಕೆ ಕಡಿಮೆ ಇರುತ್ತದೆ. ಆದರೆ, ಈ ಕುಟುಂಬಗಳಿಗೆ ಜೆಸ್ಕಾಂ 5 ಸಾವಿರದಿಂದ 91 ಸಾವಿರ ರೂಪಾಯಿ ಬಿಲ್ ನೀಡಿದೆ.
ಇಷ್ಟೊಂದು ಮೊತ್ತದ ಬಿಲ್ ಬಂದಿರುವ ಕುರಿತು ಜೆಸ್ಕಾಂ ಅಧಿಕಾರಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆಲವರಿಗೆ 10 ಸಾವಿರ, 20 ಸಾವಿರ, 40 ಸಾವಿರ ಹಾಗೂ ಒಬ್ಬರಿಗೆ 91 ಸಾವಿರ ರೂಪಾಯಿ ಬಿಲ್ ಬಂದಿದೆ. ಈ ಬಗ್ಗೆ ಕೇಳಿದರೆ ಮೊದಲು ಮೀಟರ್ ರೀಡಿಂಗ್ ಸರಿಯಾಗಿ ಬರೆಯುತ್ತಿರಲಿಲ್ಲ. ಹೀಗಾಗಿ, ಹಿಂದಿನ ಮೀಟರ್ ರೀಡಿಂಗ್ ಮೊತ್ತ, ಅದಕ್ಕೆ ಬಡ್ಡಿ ಹಾಕಲಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರಂತೆ.
ಇದರಿಂದ ರೋಸಿ ಹೋಗಿರುವ ಜನರು ಕರ್ನಾಟಕ ನವನಿರ್ಮಾಣ ಸೇನೆ ಮುಖಂಡರ ನೇತೃತ್ವದಲ್ಲಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ತಾಂತ್ರಿಕ ದೋಷದಿಂದ ಈ ರೀತಿಯಾಗಿದೆಯೇ? ಇಷ್ಟೊಂದು ಬಿಲ್ ಬಂದಿರೋದು ಯಾಕೆ? ಈ ಬಗ್ಗೆ ಪರಿಶೀಲನೆ ನಡೆಸಿ ಸರಿಪಸಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ನವನಿರ್ಮಾಣ ಸೇನೆಯ ವಿಜಯ ಕವಲೂರು, ಫುರುಖಾನ್ ಶೇಖ್ ಅಹ್ಮದ್, ಆನಂದ ಮಡಿವಾಳರ, ನಗರಸಭೆ ಮಾಜಿ ಸದಸ್ಯ ವಾಹೀದ್ ಸೋಂಪುರ ಸೇರಿದಂತೆ ಮೊದಲಾವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.