ಹೌದು.., ದುಬೈ ಮೂಲದ ಎಮಿರೆಟ್ಸ್ ಏರ್ಲೈನ್ಸ್ ತನ್ನ ಮೆನುವಲ್ಲಿ ಕನ್ನಡಕ್ಕೆ ಅವಕಾಶ ನೀಡಿ, ಅಚ್ಚರಿ ಮೂಡಿಸಿದೆ. ಬೆಂಗಳೂರಿನಿಂದ ಬೇರೆ ದೇಶಕ್ಕೆ ಸಂಚರಿಸುವ ವಿಮಾನಗಳಲ್ಲೇ ಕನ್ನಡದ ಮೆನು ಸಿಗೋದಿಕ್ಕೆ ಸಾಧ್ಯವಿಲ್ಲ. ಹೀಗಿರುವಾಗ ಪ್ರತಿನಿತ್ಯ ದುಬೈನಿಂದ ನಗರಕ್ಕೆ ಆಗಮಿಸುವ ಏಮಿರೆಟ್ಸ್ ಏರ್ಲೈನ್ಸ್ ವಿಮಾನಗಳ ಮೆನುವಿನಲ್ಲಿ ಇಂಗ್ಲಿಷ್, ಉರ್ದು ಜೊತೆ ಪ್ರಾದೇಶಿಕ ಭಾಷೆಯಾಗಿರುವ ಕನ್ನಡಕ್ಕೆ ಸ್ಥಾನ ನೀಡಲಾಗಿದೆ.
ರಾಜ್ಯದ ಪ್ರಯಾಣಿಕರಿಗೆ ಸಂತಸ
ಸುಂದರವಾಗಿ ಸಿದ್ಧಪಡಿಸಲಾಗಿರುವ ಈ ಮೆನುವಿನಲ್ಲಿ ಅಚ್ಚ ಕನ್ನಡದಲ್ಲಿ ಲಭ್ಯವಿರುವ ಊಟ-ಉಪಹಾರ ಹಾಗೂ ಲಘುಪಾನಿಯ, ಹಣ್ಣು, ಸೂಪ್ಗಳ ಮಾಹಿತಿಯನ್ನು ನೀಡಲಾಗಿದೆ. ಏರ್ ಇಂಡಿಯಾ, ಇಂಡಿಗೋ, ಏರ್ ಅರೇಬಿಯಾ ಸೇರಿದಂತೆ ಬೇರೆ-ಬೇರೆ ಸಂಸ್ಥೆಯ ವಿಮಾನಗಳಲ್ಲಿ ಈ ವ್ಯವಸ್ಥೆ ಇಲ್ಲ. ಆದ್ರೆ ವಿದೇಶಿ ವಿಮಾನದಲ್ಲಿ ಹೀಗೆ ಕನ್ನಡದಲ್ಲಿ ಮೆನು ಲಭ್ಯವಾಗಿರೋದಿಕ್ಕೆ ಪ್ರಯಾಣಿಕರು ಸಹ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ದುಬೈನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ದುಬೈಗೆ ಸೇರಿದ ವಿಮಾನದಲ್ಲಿ ಕನ್ನಡ ಮಾತನಾಡುವವರನ್ನೇ ನಿರೀಕ್ಷೆ ಮಾಡೋದಕ್ಕೆ ಸಾಧ್ಯವಿಲ್ಲ. ಹೀಗಿರುವಾಗ ಕನ್ನಡದಲ್ಲಿ ಮೆನು ಲಭ್ಯವಾಗ್ತಿರೋದು ನಿಜಕ್ಕೂ ಖುಷಿ ಮತ್ತು ಅಭಿಮಾನದ ಸಂಗತಿ ಅಂತಾರೆ.
ದುಬೈನ ವಿಮಾನ ಸಂಸ್ಥೆಯ ಈ ಕನ್ನಡ ಪ್ರೇಮಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಅಭಿನಂದನೆ ವ್ಯಕ್ತವಾಗುತ್ತಿದೆ. ಇನ್ನು ಕರಾವಳಿ ಸೇರಿದಂತೆ ಕರ್ನಾಟಕದ ನಾನಾ ಭಾಗಗಳ ಲಕ್ಷಾಂತರ ಜನರು ದುಬೈನಲ್ಲಿ ಉದ್ಯೋಗಸ್ಥರಾಗಿದ್ದಾರೆ. ಅಂತಹ ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ವಿಮಾನಯಾನ ಸಂಸ್ಥೆ ಇಂತಹ ಯೋಜನೆ ರೂಪಿಸಿದೆ ಎಂಬ ಮಾತು ಕೇಳಿ ಬಂದಿದೆ. ಏನೇ ಇರಲಿ ಕರ್ನಾಟಕದಲ್ಲಿಯೇ ಕನ್ನಡ ನಿರ್ಲಕ್ಷ್ಯಗೊಳಗಾಗುತ್ತಿರುವ ಹೊತ್ತಿನಲ್ಲಿ ದುಬೈ ವಿಮಾನ ಸಂಸ್ಥೆಯ ಕನ್ನಡ ಪ್ರೇಮ ನಿಜಕ್ಕೂ ನಮಗೆಲ್ಲರಿಗೂ ಅನುಕರಣೀಯ.