ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಡಿ. 10 ರಂದು ದೆಹಲಿಯಲ್ಲಿ ಮಹಾ ಸಮಾವೇಶ
ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವಣ್ಣನವರಿಂದ ಸ್ಥಾಪಿತ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದೆ. ಸಂವಿಧಾನದಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡುವುದರ ಜೊತೆಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಬೇಕೆಂದು ಸತತ ಹೋರಾಟ ನಡೆಸಿದ್ದೇವೆ. ಈ ಹಿಂದೆ ಇದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಸ್ವತಂತ್ರ ಧರ್ಮದ ಅಲ್ಪಸಂಖ್ಯಾತರ ಮಾನ್ಯತೆಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಆದರೆ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದರು.
ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಸಂವಿಧಾನದಲ್ಲಿ ಮಾನ್ಯತೆ ನೀಡಿ ಅಲ್ಪಸಂಖ್ಯಾತ ಮಾನ್ಯತೆ ನೀಡಬೇಕು. ಈ ದಿಸೆಯಲ್ಲಿ ಇದೇ ಡಿಸೆಂಬರ್ 10, 11 ಮತ್ತು 12 ರಂದು ನವದೆಹಲಿಯ ತಾಲಕಟೋರ ಇಂಡೋರ್ ಸ್ಟೇಡಿಯಂನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬಸವ ಅಭಿಮಾನಿಗಳು ಹಾಗೂ ಬಸವ ಧರ್ಮದ ವಿವಿಧ ಸಂಘಟನೆಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿವೆ. ಸುಮಾರು 20 ಸಾವಿರ ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಹಾಗೂ ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಅವರು ಹೇಳಿದರು. ಮುಖಂಡರಾದ ಬಸವರಾಜ ಬಳ್ಳೊಳ್ಳಿ, ಸುಂಕಪ್ಪ ಅಮರಾಪುರ , ರಾಜೇಶ್ ಸಸಿಮಠ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.