ಆದರೆ ಕೆಲವರು ಯೋಜನೆಯ ದುರುಪಯೋಗ ಮಾಡಿಕೊಂಡು ಬಡವರ ಹೊಟ್ಟೆ ಮೇಲೆ ಹೊಡೆದು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಅನ್ನೋ ಆರೋಪ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಆಳಂದ ತಾಲೂಕಿನ ಶ್ರೀಚಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಬಡಪಾಯಿಗಳ ಹೊಟ್ಟೆ ಮೇಲೆ ಹೊಡೆಯಲಾಗ್ತಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಆರೋಪಿಸಿದ್ದಾರೆ.
ಗುಳೆ ತಪ್ಪಿಸಲು ಯೋಜನೆ ಅಡಿ ಅರ್ಹರಿಗೆ ಉದ್ಯೋಗ ಕಲ್ಪಿಸಬೇಕು. ಆದ್ರೆ ವಿದೇಶದಲ್ಲಿರುವ ಮತ್ತು ಈಗಾಗಲೇ ಸಾವನ್ನಪ್ಪಿದವರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಹಣ ಗುಳುಂ ಮಾಡಲಾಗ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಪಂಚಾಯಿತಿಗೆ ಹೋದ್ರೆ ಅಧಿಕಾರಿಗಳು ಸಿಗ್ತಿಲ್ಲ. ಎನ್ಎಮ್ಆರ್ನಲ್ಲಿ ಬೋಗಸ್ ಹೆಸರುಗಳನ್ನು ಸೇರಿಸಿ ಸರಕಾರಿ ಖಜಾನೆ ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲಸ ಎಂದು ಗ್ರಾ.ಪಂಗೆ ಹೋದ್ರೂ ಸಿಗ್ತಿಲ್ಲ ಕೆಲಸ ಬೋಗಸ್ ಬಿಲ್ಗಳನ್ನು ಸೃಷ್ಟಿಸಿ ಭ್ರಷ್ಟಾಚಾರ ಎಸಗುವುದು, ಕೆಲಸಕ್ಕೆ ಅರ್ಜಿ ಹಾಕಿದರೂ ಕೆಲಸ ಕೊಡಲು ವಿಳಂಬ ಮಾಡುವುದು, ಬಾಕಿ ವೇತನ 3-4 ತಿಂಗಳಾದರೂ ಕೊಡದೆ ವಿನಾಕಾರಣ ತೊಂದರೆ ಕೊಡುತ್ತಿರುವುದನ್ನು ಅಧಿಕಾರಿಗಳು ಮಾಡ್ತಿದ್ದಾರೆ. ಕಳೆದ ವರ್ಷದ ಅವಧಿಯಲ್ಲಿ ಹೊಡಲ್, ಕೊಟ್ಟರಗಾ ಜವಳಗಾ ಗ್ರಾಮ ವ್ಯಾಪ್ತಿಯಲ್ಲಿ ಬೆವರು ಸುರಿಸಿ ಕೆಲಸ ಮಾಡಿದರೆ, ಕೊಡಬೇಕಾದ ಹಣ ಕೂಡಾ ಪಾವತಿ ಮಾಡಿಲ್ಲ. ಈ ಕುರಿತು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಹೀಗಾದ್ರೆ ನಾವು ಬದುಕುವುದಾದ್ರೂ ಹೇಗೆ ಎಂದು ಕೂಲಿ ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ.
ಇದು ಕೇವಲ ಆಳಂದ ತಾಲೂಕಿನಲ್ಲಿ ಮಾತ್ರವಲ್ಲ ಇತರಡೆಯೂ ಇದೇ ರೀತಿಯಾಗಿ ಬಡ ಕೂಲಿಕಾರರಿಗೆ ಮೋಸ ಮಾಡಲಾಗ್ತಿದೆ. ಎನ್ಎಮ್ಆರ್ನಲ್ಲಿ ನಿಜವಾದ ಕೂಲಿಕಾರರ ಹೆಸರು ಕೈಬಿಟ್ಟು ತಮ್ಮ ಅನುಕೂಲಕ್ಕೆ ತಕ್ಕ ಹೆಸರು ಸೇರಿಸಿ ನಿಜವಾದ ಫಲಾನುಭವಿಗಳಿಗೆ ವಂಚಿಸಲಾಗ್ತಿದೆ. ಸಂಬಂಧಿತ ಸಚಿವರು, ಉನ್ನತ ಅಧಿಕಾರಿಗಳು ಇತ್ತ ಗಮನ ಹರಿಸಿ ನಿಜವಾದ ಕೂಲಿಕಾರರ ಬೆನ್ನಿಗೆ ನಿಲ್ಲಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಆಗ್ರಹಿಸಿದೆ.