ಆದರೆ ಸುದೀಪ್ ಹಾಗೂ ವಿಜಯ್ ಸಿನಿಮಾಗಳಿಗೂ ಈ ಜಟ್ಟಿ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ವಿಲಾಸ್ ಪಾಟೀಲ್ ಎಂಬ ಯುವನಟ 'ಜಟ್ಟಿ' ಸಿನಿಮಾ ಮೂಲಕ 40 ವರ್ಷದ ಹಿಂದಿನ ಜಟ್ಟಿಯೊಬ್ಬನ ಕಥೆ ಹೇಳಲು ಹೊರಟಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿತ್ತು. ಈ ವೇಳೆ ಚಿತ್ರದ ಟೈಟಲನ್ನು ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಬಿಡುಗಡೆ ಮಾಡಿದರು.
ವಿಜಯಪುರದ ಹಳ್ಳಿಯೊಂದರ ಜಟ್ಟಿಯೊಬ್ಬನ ಕಥೆ ಆಧರಿಸಿರುವ ಈ ಸಿನಿಮಾವನ್ನು ನಿರ್ದೇಶಕ ಬಿ.ರಾಮಮೂರ್ತಿ ಮಾರ್ಗದರ್ಶನದಲ್ಲಿ ವಿಲಾಸ್ ಪಾಟೀಲ್ ನಿರ್ದೇಶಿಸುತ್ತಿದ್ದಾರೆ. ಜೊತೆಗೆ ವಿಲಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕಾಗಿ ವಿಲಾಸ್ ಪಾಟೀಲ್ ಕುಸ್ತಿ ಕಲಿತುಕೊಂಡು ಅಖಾಡಕ್ಕೆ ಇಳಿಯುತ್ತಿದ್ದಾರಂತೆ. ಈ ಜಟ್ಟಿ ಪತ್ನಿಯಾಗಿ ಯುವ ನಟಿ ರಕ್ಷಾ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಬಿ.ರಾಮಮೂರ್ತಿ ಕೂಡಾ ಈ ಚಿತ್ರದಲ್ಲಿ ಒಂದು ಪಾತ್ರ ಮಾಡುತ್ತಿದ್ದಾರಂತೆ.
ಹಾಗೆ ನಿರ್ದೇಶಕ ಗುರು ಪ್ರಸಾದ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಪ್ರವೀಣ್ ಡಿ. ರಾವ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಶ್ಯಾಮ್ ಸಾಲ್ವನ್ ಕ್ಯಾಮರಾ ಹಿಡಿದಿದ್ದಾರೆ. ನಂದಿ ಬಸವೇಶ್ವರ ಪ್ರೊಡಕ್ಷನ್ ಹೌಸ್ ಅಡಿ ಎಂ.ಆರ್. ಪಾಟೀಲ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.