ಆಪರೇಷನ್ ಕಮಲಕ್ಕೆ ಮೋದಿ, ಶಾ ಹಣಕಾಸಿನ ನೆರವು: ಡಿ. ಬಸವರಾಜ್ ಆರೋಪ
ಜಿಲ್ಲಾ ವರದಿಗಾರರ ಕೂಟದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ನಿಯಂತ್ರಣ ಮಾಡಿದ್ದೇನೆ ಎನ್ನುವ ಮೋದಿ ಅವರು ಆಪರೇಷನ್ ಕಮಲಕ್ಕೆ ನೂರಾರು ಕೋಟಿ ರೂಪಾಯಿ ಒದಗಿಸಿದ್ದು, ಇದಕ್ಕೆಲ್ಲಿಂದ ಹಣ ಬಂತು? ಪ್ರಾಯಶಃ ಈ ಹಣ ರಫೆಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಪಡೆದ ಲಂಚದ ಹಣ ಇರಬಹುದೆಂಬ ಶಂಕೆ ಇದೆ ಎಂದು ಆರೋಪಿಸಿದರು. ಆಪರೇಷನ್ ಕಮಲ ವಿಚಾರವಾಗಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ಗುರುಮಿಟ್ಕಲ್ ಶಾಸಕ ನಾಗನಗೌಡರ ಪುತ್ರ ಶರಣ್ ಗೌಡ ಜೊತೆಗಿನ ಸಂಭಾಷಣೆಯ ಆಡಿಯೋದಲ್ಲಿರುವುದು ನನ್ನದೇ ಧ್ವನಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪರೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ತಮ್ಮೆಲ್ಲಾ ಸ್ಥಾನಗಳಿಗೆ ಯಡಿಯೂರಪ್ಪ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಹೊಂದಬೇಕು ಎಂದು ಒತ್ತಾಯಿಸಿದರು.
ಆಪರೇಷನ್ ಕಮಲ ಹೆಸರಿನಡಿ ಚುನಾಯಿತ ಜನಪ್ರತಿನಿಧಿಗಳನ್ನು ಪಶು ಪಕ್ಷಿಗಳಂತೆ, ನಾಯಿ ನರಿಗಳಂತೆ ಖರೀದಿಸುವ ಮೂಲಕ ಕೆಟ್ಟ ಸಂಪ್ರದಾಯವನ್ನು ಬಿಜೆಪಿ ಮತ್ತು ಯಡಿಯೂರಪ್ಪ ಮುಂದುವರಿಸಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಬಗ್ಗೆಯೂ ಆಡಿಯೋದಲ್ಲಿ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ. ಆಡಿಯೋ ಬಿಡುಗಡೆ ಸಂಬಂಧ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಯಡಿಯೂರಪ್ಪ ಅವಾಚ್ಯ ಶಬ್ದಗಳನ್ನು ಬಳಸಿದ್ದು, ತಕ್ಷಣವೇ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಅವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುಪ್ರೀಂಕೋರ್ಟ್ ಜಡ್ಜ್ ಗಳ ಬಗ್ಗೆಯೂ ಆಡಿಯೋದಲ್ಲಿ ಮಾತನಾಡಲಾಗಿದೆ. ಹಾಗಾಗಿ ಸುಮೋಟೊ ಕೇಸ್ ದಾಖಲಿಸಿ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಪರೇಷನ್ ಕಮಲದ ಸೂತ್ರಧಾರರಾಗಿರುವ ಪ್ರಧಾನಿ ಮೋದಿ, ಅಮಿತ್ ಶಾ ಬಗ್ಗೆಯೂ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಬರಬೇಕಿದೆ ಎಂದು ಅವರು ಹೇಳಿದ್ದಾರೆ.