ಸಮರ್ಥನಂ ಸಂಸ್ಥೆ ವಿಕಲಚೇತನರಿಗೆ ಅನೇಕ ಕಾರ್ಯಕ್ರಮಗಳು ಮತ್ತು ಅನೇಕ ಯೋಜನೆಗಳನ್ನು ತರುವಲ್ಲಿ ಸರ್ಕಾರಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಪ್ರತಿ ವರ್ಷವು ವಿಭಿನ್ನ ಥೀಮ್ ಇಟ್ಟುಕೊಂಡು ವಾಕ್ಥಾನ್ ಆಯೋಜನೆ ಮಾಡುತ್ತಾ ಬಂದಿದೆ. ಈ ವರ್ಷವೂ ಅದರಂತೆ ಟಿ ಇ ಕನೆಕ್ಟಿವಿಟಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ 14 ನೇ "ಟಿಇ ಕನೆಕ್ಟಿವಿಟಿ ಬೆಂಗಳೂರು ವಾಕಥಾನ್" ಗೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಂದ ಅಭೂತಪೂರ್ವ ಬೆಂಬಲ ದೊರೆತಿದೆ. ಈ ಕಾರ್ಯಕ್ರಮದಲ್ಲಿ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು,ಸೇರಿದಂತೆ ಹಲವು ಕ್ಷೇತ್ರಗಳ ಸಾವಿರಾರು ಜನರು ವಿಕಲಚೇತನರಿಗೆ ಸಾಥ್ ನೀಡಿದರು.
ವಾಕಥಾನ್ಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ ಜಿ.ಕೆ, ಡಿಜಿಟಲ್ ಕ್ಷೇತ್ರ ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದೆ. ಈ ನಿಟ್ಟಿನಲ್ಲಿ ಸಮರ್ಥನಂ ಸಂಸ್ಥೆ ಐಟಿ ಸಂವಹನ ಕ್ಷೇತ್ರದೊಂದಿಗೆ ಕೆಲಸ ಮಾಡುತ್ತಿದ್ದು, ಆರಂಭದಿಂದಲೇ ವಿಕಲಚೇತನರನ್ನು ಸೇರ್ಪಡೆ ಮಾಡಿಕೊಂಡಿದೆ.
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಮತ್ತು ವೇದಿಕೆಗಳು ಆರಂಭವಾಗಿದ್ದು, ಸಮರ್ಥನಂನಲ್ಲಿನ ಪ್ರತಿಯೊಬ್ಬ ಫಲಾನುಭವಿಯೂ ಜ್ಞಾನವನ್ನು ವೃದ್ಧಿಸಿಕೊಳ್ಳುವಂತಾಗಿದೆ. ನಾವು ಸಮಾನ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯವನ್ನು ಮುಂದುವರಿಸುತ್ತೇವೆ ಮತ್ತು ಎಲ್ಲರಿಗೂ ಸಮಾನ ಅವಕಾಶ ಲಭಿಸಬೇಕೆಂಬ ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.
ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ ಸಮರ್ಥನಂ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ವಿಕಲಚೇತನರಿಗೆ ಈ ಕಾರ್ಯಕ್ರಮ ಅವಶ್ಯಕವಾಗಿತ್ತು ಎಂದರು.